news18-kannada Updated:April 16, 2021, 10:23 PM IST
ಸಿಎಂ ಬಿಎಸ್ ಯಡಿಯೂರಪ್ಪ
ಬೆಂಗಳೂರು (ಏ. 16): ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕೋವಿಡ್ ಸೋಂಕು ನಿಯಂತ್ರಣ ಕುರಿತ ಚರ್ಚೆಗಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಏ. 18ರಂದು ಕರೆದಿದ್ದ ಸರ್ವಪಕ್ಷ ಸಭೆಯನ್ನು ಮುಂದೂಡಲಾಗಿದೆ. ಇದೇ ಭಾನುವಾರ ಸಂಜೆ 4 ಗಂಟೆಗೆ ಸಭೆ ನಿಗದಿಸಿ ಮುಖ್ಯಮಂತ್ರಿಗಳು ಪ್ರತಿಪಕ್ಷಗಳ ನಾಯಕರಿಗೆ ಪತ್ರ ಬರೆದಿದ್ದರು. ಇದೀಗ ಸಿಎಂ ಮತ್ತೊಮ್ಮೆ ಕೋವಿಡ್ ಸೋಂಕಿಗೆ ತುತ್ತಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನಲೆಯಲ್ಲಿ ಸಭೆಯನ್ನು ಮುಂದೂಡಲಾಗಿದೆ. ಇದಕ್ಕೆ ಮೊದಲು ಸಭೆಯನ್ನು ಮುಂದೂಡುವ ಬದಲು ಸಿಎಂ ಅನುಪಸ್ಥಿತಿಯಲ್ಲಿ ಹಿರಿಯ ಸಚಿವರೊಬ್ಬರ ಉಸ್ತುವಾರಿಯಲ್ಲಿ ಸಭೆ ನಡೆಸುವ ಬಗ್ಗೆ ಚರ್ಚೆ ನಡೆದಿತ್ತು. ಈ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಕೂಡ ಅನುಮತಿ ನೀಡಿದ್ದು, ಸಭೆ ಉಸ್ತುವಾರಿ ವಹಿಸುವ ಸಚಿವರ ಹೆಸರು ಕುರಿತು ನಾಳೆ ಪ್ರಕಟಣೆ ಹೊರಡಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಆದರೆ, ಇದೀಗ ಈ ಸಭೆಯನ್ನು ಮುಂದೂಡಲಾಗಿದೆ.
ಮುಖ್ಯಮಂತ್ರಿಗಳ ಆರೋಗ್ಯ ಇನ್ನೆರಡು ದಿನದಲ್ಲಿ ಸ್ವಲ್ಪ ಚೇತರಿಕೆ ಕಾಣಲಿದ್ದು, ನಂತರ ಮತ್ತೆ ಸಭೆ ನಿಗದಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಸೋಂಕಿನ ಹಿನ್ನಲೆ ಆಸ್ಪತ್ರೆಗೆ ದಾಖಲಾಗಿರುವ ಸಿಎಂ ಆರೋಗ್ಯದ ಕುರಿತು ಮಣಿಪಾಲ್ ಆಸ್ಪತ್ರೆ ವೈದ್ಯರು ಸಂಜೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿತ್ತು. ಮುಖ್ಯಮಂತ್ರಿಗಳಿಗೆ ನುರಿತ ವೈದ್ಯರ ತಂಡ ರಚಿಸಿ ನಿಗಾವಹಿಸಲಾಗಿದೆ. ಉಸಿರಾಟ ಸಂಬಂಧಿತ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯ ಸಿಎಂ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪ್ರಕಟಣೆ ತಿಳಿಸಿತು.
ರಾಜ್ಯದಲ್ಲಿ ಕೊರೋನಾ ಮಹಾಮಾರಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲ್ಲೇ ಇದ್ದು , ಆತಂಕ ಎದುರಾಗಿದೆ. ಈ ನಿಟ್ಟಿನಲ್ಲಿ ಲಾಕ್ಡೌನ್ನಂತಹ ಕ್ರಮ ಒಂದೇ ಪರಿಹಾರವಲ್ಲ. ಇದರ ಹೊರತಾಗಿ ನಿಯಂತ್ರಣಕ್ಕೆ ಯಾವ ಕ್ರಮ ಕೈಗೊಳ್ಳಬಹುದು ಎಂಬ ಕುರಿತು ಅಭಿಪ್ರಾಯ ತಿಳಿಸುವಂತೆ ಸಿಎಂ ಉಭಯ ಸದನ ನಾಯಕರ ಸಭೆ ಕರೆದಿದ್ದರು.
Published by:
Seema R
First published:
April 16, 2021, 10:23 PM IST