- News18 Kannada
- Last Updated: April 16, 2021, 6:20 PM IST
- KISHAN KUMAR News18 Media
ಮಂಗಳೂರು: ಅದೊಂದು 50 ಜನ ಕಿರಾತಕರಿರುವ ಡಕಾಯಿತರ ತಂಡ. ನಾಲ್ಕು ಗುಂಪುಗಳಾಗಿ ದಾಳಿ ಇಡುವ ಈ ತಂಡ ಕಣ್ಣಿಟ್ಟರೆ ಮುಗಿಯಿತು. ಅಲ್ಲಿ ನೆತ್ತರು ಹರಿಸಿದರೂ ಸರಿ ಅಲ್ಲೊಂದು ದರೋಡೆ ಆಗಲೇಬೇಕು. ಅದು ಈ ತಂಡದ ಅಜೆಂಡಾ. ಇನ್ನು ಈ ಡಕಾಯಿತರು ಕಳೆದ ಹಲವು ವರ್ಷಗಳಲ್ಲಿ ರಾಜ್ಯದಲ್ಲಿ ಹಲವು ಕಡೆ ದಾಳಿ ಇಟ್ಟು ದರೋಡೆ, ಡಕಾಯಿತಿ ಮಾಡಿದ್ದರು. ಬೆಂಗಳೂರು ಸೇರಿದಂತೆ ರಾಜ್ಯ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಖತರ್ನಾಕ್ ತಂಡದ 9 ಜನರನ್ನು ಮಂಗಳೂರು ಪೊಲೀಸರು ಬಂಧಿಸಿದ್ದರು. ಇದೀಗ ಮತ್ತೆ 6 ಜನರನ್ನು ಬಂಧಿಸಿದ್ದಾರೆ.
50 ಕ್ಕೂ ಹೆಚ್ಚು ಜನರಿರುವ ಗುಂಪು ನಾಲ್ಕು ತಂಡಗಳಾಗಿ ಡಕಾಯಿತಿಗೆ ಇಳಿಯುತ್ತಿತ್ತು. ಇವರು ಹೆದ್ದಾರಿ ಡಕಾಯಿತಿ, ಮನೆ ದರೋಡೆ, ಕಳ್ಳತನ ಸೇರಿದಂತೆ ವಿವಿಧ ಅಪರಾಧ ಮಾಡುತ್ತಿದ್ದರು. ಇವರ ಡಕಾಯಿತಿಗೆ ಯಾರಾದರೂ ಅಡ್ಡ ಬಂದರೆ ಅಡ್ಡಡ್ಡಾ ಸೀಳಿ ದರೋಡೆ ಮಾಡುತ್ತಿದ್ದರು. ಈ ಗ್ಯಾಂಗ್ ವಿವಿಧ ಜಿಲ್ಲೆಗಳ ಪೊಲೀಸರಿಗೆ ತಲೆ ನೋವಾಗಿತ್ತು. ಬೆಂಗಳೂರು, ದಕ್ಷಿಣ ಕನ್ನಡ, ಉಡುಪಿ, ಹಾಸನ ಸೇರಿದಂತೆ ಮಂಗಳೂರಿನ 12 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ಚಳ್ಳೆ ಹಣ್ಣು ತಿನ್ನಿಸಿದ್ದರು. ಇಂತಹ ನಟೋರಿಯಸ್ ತಂಡದ 9 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟು 28 ಪೊಲೀಸ್ ಠಾಣೆಗಳಿಗೆ ಬೇಕಾದ ಕಿಂಗ್ ಪಿನ್ ಗಳನ್ನು ಈಗ ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಇದನ್ನು ಓದಿ: ಸಿಎಂಗೆ ಕೊರೋನಾ ಸೋಂಕು; ಸಂಪರ್ಕದಲ್ಲಿದ್ದ ಸಚಿವ ಸುಧಾಕರ್ ಕ್ವಾರಂಟೈನ್ ಆಗಬೇಕೇ?
ಕಾರ್ಯಾಚರಣೆ ಮುಂದುವರೆದಂತೆ ಮತ್ತೆ 6 ಜನರನ್ನು ಬಂಧಿಸಲಾಗಿದೆ. ಅದರಲ್ಲಿ ಅರೇಹಳ್ಳಿ ಮನೆಯಲ್ಲಿ ಪಿಸ್ತೂಲ್ ಕದ್ದಿದ್ದ ಬೋಳಿಯಾರ್ ಮನ್ಸೂರ್ ಅನ್ನು ಕೂಡ ಬಂಧಿಸಲಾಗಿದೆ. ಈ ತಂಡದ ಕಿಂಗ್ ಪಿನ್ ಗಳಾದ ಮೊಹಮ್ಮದ್ ಝುಬೈರ್, ಇಬ್ರಾಹಿಂ ಲತೀಫ್, ರಾಕೇಶ್, ಅರ್ಜುನ್ ಮತ್ತು ಮೋಹನ್ ಕೂಡ ಅಂದರ್ ಆಗಿದ್ದಾರೆ. ಬಂಧಿತರಿಂದ ದರೋಡೆ ಮಾಡಿಲ್ಪಟ್ಟ ಚಿನ್ನ, ಬೆಳ್ಳಿ, ಕಾರು, ಮೊಬೈಲ್ ಸೇರಿದಂತೆ 41.82 ಲಕ್ಷ ಮೌಲ್ಯದ ವಸ್ತುಗಳನ್ನ ಜಪ್ತಿ ಮಾಡಲಾಗಿದೆ. ಇನ್ನು ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಮಾರಕಾಸ್ತ್ರಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.
ಪ್ರಕರಣ ಸಂಬಂಧ ಮೂಡಬಿದರೆ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಈ ಗ್ಯಾಂಗ್ ನಲ್ಲಿ ಇನ್ನು ಸಾಕಷ್ಟು ಜನರು ತಲೆಮರೆಸಿಕೊಂಡಿದ್ದಾರೆ. ಅವರನ್ನು ಪೊಲೀಸರು ಹುಡುಕಾಡುತ್ತಿದ್ದಾರೆ. ಇವರ ಪತ್ತೆಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿ ಕುಮಾರ್ ಮಂಗಳೂರು ನಗರ ಡಿಸಿಪಿ ಹರಿ ರಾಂ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. 16 ಮಂದಿಯ ಸ್ಪೆಷಲ್ ಪೊಲೀಸ್ ಟೀಂ ದರೋಡೆಕೋರರ ತಂಡವನ್ನು ಭೇಧಿಸುತ್ತಿದೆ. ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸುವ ವಿಶ್ವಾಸ ಪೊಲೀಸ್ ತಂಡಕ್ಕಿದೆ. ಆರೋಪಿಗಳನ್ನು ಬಂಧನ ಮಾಡಿ, ದರೋಡೆಕೋರರಿಂದ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಸುವ ಭರವಸೆಯನ್ನು ಮಂಗಳೂರು ಪೊಲೀಸರು ನೀಡಿದ್ದಾರೆ.