- News18 Kannada
- Last Updated: April 16, 2021, 1:03 PM IST
ಧಾರವಾಡ: ಕೊರೋನಾ ಎರಡನೇ ಅಲೆಯಿಂದ ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಗತ್ಯವಿದ್ದಲ್ಲಿ ಸರ್ಕಾರದ ಆದೇಶದಂತೆ ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಶೇ.50 ರಷ್ಟು ಹಾಸಿಗೆಗಳನ್ನು ಕೋವಿಡ್ ರೋಗಿಗಳ ಚಿಕಿತ್ಸೆಗೆ ಬಳಸಿಕೊಳ್ಳಲಾಗುವುದು. ಮೂಲಸೌಕರ್ಯ ಹೊಂದಿರುವ ಎಲ್ಲ ಖಾಸಗಿ ಆಸ್ಪತ್ರೆಗಳು ಮೊದಲಿನಂತೆ ಸಹಕಾರ ನೀಡಬೇಕು ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ಧಾರವಾಡದ ಜಿಲ್ಲಾ ಸಭಾಂಗಣದಲ್ಲಿ ಖಾಸಗಿ ಆಸ್ಪತ್ರೆಗಳ ಸಭೆ ನಡೆಸಿದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ಜಿಲ್ಲಾ ಆಸ್ಪತ್ರೆ ಹಾಗೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಪೀಡಿತರಿಗೆ ಅಗತ್ಯ ಚಿಕಿತ್ಸೆ ನೀಡಲು ಔಷಧ ಮತ್ತು ಹಾಸಿಗೆ ವ್ಯವಸ್ಥೆ ಇದೆ. ಮುಂದಿನ ದಿನಗಳಲ್ಲಿ ಅಗತ್ಯವಾದರೆ ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್ ರೋಗಿಗಳನ್ನು ರೆಫರಲ್ ಪತ್ರ ನೀಡಿ ಕಳಿಸಲಾಗುವುದು ಎಂದು ಹೇಳಿದರು.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ 97 ಪ್ರಕರಣ, ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ 50 ಮತ್ತು 32 ಐಸಿಯು ಪ್ರಕರಣಗಳು ದಾಖಲಾಗಿದ್ದು ಜಿಲ್ಲೆಯಲ್ಲಿ ಒಟ್ಟು 837 ಕೋವಿಡ್ ಸಕ್ರಿಯ ಪ್ರಕರಣ ವರದಿಯಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ರಷ್ಟು ಬೆಡ್‍ಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿಡಲಾಗಿದ್ದು ಉತ್ತಮವಾದ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಾದ್ಯಾದಂತ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ತಪ್ಪದೇ ಎರಡನೇ ಡೋಸ್ ಲಸಿಕೆಯನ್ನು ಪಡೆಯಬೇಕು ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಅವರು ಹೇಳಿದರು.
ಇದನ್ನೂ ಓದಿ: Coronavirus - ಏ. 20ರವರೆಗೆ ಹೊಸ ಕರ್ಫ್ಯೂ ಕ್ರಮ ಇಲ್ಲ: ಸಿಎಂ ಯಡಿಯೂರಪ್ಪ ಹೇಳಿಕೆ
ಕಿಮ್ಸ್ ಆಸ್ಪತ್ರೆಯಲ್ಲಿ 200 ರೆಮಡಿಸಿವರ್, ಜಿಲ್ಲಾ ಆಸ್ಪತ್ರೆಯಲ್ಲಿ 200, ಜಿಲ್ಲಾ ಔಷಧ ದಾಸ್ತಾನುದಲ್ಲಿ 50 ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸುಮಾರು 1000 ಸೆರಿದಂತೆ ಜಿಲ್ಲೆಯಲ್ಲಿ ಒಟ್ಟು 1500 ರೆಮಡಿಸಿವರ್ ಇಂಜಕ್ಷನ್ ಲಭ್ಯವಿದೆ. ಲಿಕ್ವಿಡ್ ಆಕ್ಸಿಜನ್ ಕೂಡಾ ಲಭ್ಯವಿದ್ದು ಚಿಕಿತ್ಸೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ಸುಮಾರು 250 ರಷ್ಟು ಬೆಡ್‍ಗಳನ್ನು ಮೀಸಲಿಡಲಾಗಿದೆ. ಅದರಲ್ಲಿ 97 ಬೆಡ್‍ಗಳನ್ನು ಭರ್ತಿ ಮಾಡಲಾಗಿದ್ದು, ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ (ಕಲಘಟಗಿ, ಕುಂದಗೋಳ, ನವಲಗುಂದ) ಸುಮಾರು 50 ರಷ್ಟು ಬೆಡ್‍ಗಳನ್ನು ಮೀಸಲಿಟ್ಟು, ಚಿಕಿತ್ಸೆಗೆ ಬೇಕಾದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕಟ್ಟು ನಿಟ್ಟಾಗಿ ಅನುಸರಿಸಲಾಗುತ್ತಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಕೋವಿಡ್ ಚಿಕಿತ್ಸೆಗಾಗಿ ಸರ್ಕಾರವು ದರಗಳನ್ನು ನಿಗದಿಗೊಳಿಸಿ ಅಧಿಸೂಚನೆ ಹೊರಡಿಸಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ರೆಫರಲ್ ಪತ್ರದ ಮೂಲಕ ಕಳಿಸುವ ಪ್ರಕರಣಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿನ ಕೋವಿಡ್ ಚಿಕಿತ್ಸಾ ದರ ಇಂತಿದೆ: ಸಾಮಾನ್ಯ ವಾರ್ಡ್ - 5200, ಹೆಚ್.ಡಿ.ಯು - 7,000, ಆಮ್ಲಜನಕ ರಹಿತ ಐಸೋಲೆಶನ್ ವಾರ್ಡ್ - 8,500, ಆಮ್ಲಜನಕ ಸಹಿತ ಐಸೋಲೆಶನ್ ವಾರ್ಡ್ - 10,000 ರೂ ಗಳನ್ನು ನಿಗದಿಪಡಿಸಲಾಗಿದೆ. ಕೋವಿಡ್ ಪೀಡಿತರು ನೇರವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಕೋವಿಡ್ ಚಿಕಿತ್ಸಾ ದರ: ಸಾಮಾನ್ಯ ವಾರ್ಡ್ - 10,000, ಹೆಚ್.ಡಿ.ಯು - 12,000, ಆಮ್ಲಜನಕ ರಹಿತ ಐಸೋಲೆಶನ್ ವಾರ್ಡ್ - 15,000, ಆಮ್ಲಜನಕ ಸಹಿತ ಐಸೋಲೆಶನ್ ವಾರ್ಡ್ - 25,000 ರೂ ಗಳನ್ನು ನಿಗದಿಪಡಿಸಲಾಗಿದೆ ನಿತೇಶ ಪಾಟೀಲ ಅವರು ತಿಳಿಸಿದರು.
ವರದಿ: ಮಂಜುನಾಥ ಯಡಳ್ಳಿ