- News18 Kannada
- Last Updated: April 16, 2021, 8:38 AM IST
ಬೆಂಗಳೂರು (ಏ. 16): ಬೆಂಗಳೂರಿನಲ್ಲಿ ಕೊರೋನಾ ಮರಣ ಮೃದಂಗ ಶುರುವಾಗಿದ್ದು, ಸಿಂಗಲ್ ಡಿಜಿಟ್ ಇದ್ದ ಸಾವಿನ ಸಂಖ್ಯೆ ಡಬಲ್ ಡಿಜಿಟ್ಗೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಿದ್ದು, ನಿನ್ನೆ ಒಂದೇ ದಿನ ಸುಮಾರು 15 ಸಾವಿರ ಕೇಸ್ಗಳು ಪತ್ತೆಯಾಗಿವೆ. ಬೆಂಗಳೂರೊಂದರಲ್ಲೇ ನಿನ್ನೆ 10,497 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿ ನಿನ್ನೆ 30 ಜನ ಸಾವನ್ನಪ್ಪಿದ್ದು, ಈ ಮೂಲಕ 12 ದಿನದಲ್ಲಿ ಬೆಂಗಳೂರಿನಲ್ಲಿ ಕೊರೋನಾಗೆ 322 ಮಂದಿ ಬಲಿಯಾದಂತಾಗಿದೆ. ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ಗಳು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗೇ, ಆ್ಯಂಬುಲೆನ್ಸ್ಗಳ ಕೊರತೆಯೂ ಎದುರಾಗಿದೆ.
ಬೆಂಗಳೂರಿನಲ್ಲಿ ಕೊರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ ಏಕಾಏಕಿ ಹೆಚ್ಚಳವಾಗಿದೆ. ಏಪ್ರಿಲ್ 4ರಂದು ಬೆಂಗಳೂರಿನಲ್ಲಿ 8 ಜನರು ಸಾವಿಗೀಡಾಗಿದ್ದರು. ಅದೇ ಏಪ್ರಿಲ್ 13ರಂದು ಒಂದೇ ದಿನ ಮೃತ ಪಟ್ಟವರ ಸಂಖ್ಯೆ 55ಕ್ಕೆ ಏರಿಕೆಯಾಗಿದೆ. ಕಳೆದ 11 ದಿನಗಳಲ್ಲಿ ಸಿಲಿಕಾನ್ ಸಿಟಿ ಒಂದರಲ್ಲೇ ಬರೋಬ್ಬರಿ 292 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಬೆಂಗಳೂರಿಗರನ್ನು ಚಿಂತೆಗೀಡು ಮಾಡಿದೆ.
ಕರ್ನಾಟಕದಲ್ಲಿ ನಿನ್ನೆ ಒಂದೇ ದಿನ 66 ಜನರು ಸಾವನ್ನಪ್ಪಿದ್ದು, 555 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಏಪ್ರಿಲ್ 4ರಂದು ಮೃತರ ಸಂಖ್ಯೆ- 8 ಇದ್ದುದು ಏಪ್ರಿಲ್ 5ರಂದು - 18, ಏಪ್ರಿಲ್ 6ರಂದು- 26, ಏಪ್ರಿಲ್ 7ರಂದು - 25, ಏಪ್ರಿಲ್ 8ರಂದು - 22, ಏಪ್ರಿಲ್ 9ರಂದು- 29, ಏಪ್ರಿಲ್ 10ರಂದು - 19, ಏಪ್ರಿಲ್ 11ರಂದು - 27, ಏಪ್ರಿಲ್ 12ರಂದು - 40, ಏಪ್ರಿಲ್ 13ರಂದು- 55, ಏಪ್ರಿಲ್ 14ರಂದು - 23, ಏಪ್ರಿಲ್ 15ರಂದು - 30ಕ್ಕೆ ಏರಿಕೆಯಾಗಿದೆ.
ಇಂದಿನ 15/04/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿhttps://t.co/euaq1dhiDf@mla_sudhakar @DVSadanandGowda @ShobhaBJP @PCMohanMP @Tejasvi_Surya @CTRavi_BJP @kiranshaw @WFRising @citizenkamran @BangaloreBuzz @RCBTweets @NammaKarnataka_ pic.twitter.com/tBfQmjNUGH
ಏಕಾಏಕಿ ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣವೇನೆಂಬ ಬಗ್ಗೆ ಮಾಹಿತಿ ನೀಡಿರುವ ತಜ್ಞರು, ಹೋಂ ಐಸೋಲೇಷನ್ನಲ್ಲಿ ಸರಿಯಾಗಿ ಆರೋಗ್ಯ ನಿರ್ವಹಣೆ ಮಾಡದೆ ಇರೋದು ಒಂದು ಕಾರಣ ಎಂದಿದ್ದಾರೆ. ILI ಹಾಗೂ SARI ಇರುವವರನ್ನು ಅತಿ ವೇಗವಾಗಿ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಕೊರೋನಾ ಎಂಡಿಂಗ್ ಸ್ಟೇಜ್ನಲ್ಲಿ ಆಸ್ಪತ್ರೆಗಳಿಗೆ ಸೇರುತ್ತಿರುವುದು, ಕೋಮಾರ್ಬಿಟಿ ಇದ್ದರೂ ಆರೋಗ್ಯದ ಬಗ್ಗೆ ಕ್ರಮ ವಹಿಸದೆ ಇರೋದರಿಂದ ಕೊರೋನಾ ಸೋಂಕಿನಿಂದ ಮೃತ ಪಡುವವರ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂದಿದ್ದಾರೆ.
ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚು ಹಾಸಿಗೆಗಳನ್ನು ಕೊರೋನಾ ಸೋಂಕಿತರಿಗೆ ಮೀಸಲಿಡಲು ಸೂಚಿಸಲಾಗಿದೆ. ಖಾಸಗಿ ಆಸ್ಪತ್ರೆಗಳು ಕೂಡ ಹಾಸಿಗೆ ಮೀಸಲಿಡದಿದ್ದರೆ ಗಂಭೀರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಎಚ್ಚರಿಕೆ ನೀಡಿದ್ದಾರೆ. ಕೋವಿಡ್ ನಿಯಂತ್ರಣ ಸಂಬಂಧ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, 400 ಕ್ಕೂ ಹೆಚ್ಚು ವೈದ್ಯರನ್ನು ವೈದ್ಯಕೀಯ ಶಿಕ್ಷಣ ಇಲಾಖೆಯು ಆರೋಗ್ಯ ಇಲಾಖೆಗೆ ನೀಡಿದೆ. ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯನ್ನು ಹಾಗೂ ಐಎಲ್ಐ ಗೆ ಮೀಸಲಿಡಲು ತೀರ್ಮಾನಿಸಲಾಗಿದೆ. ವಿಕ್ಟೋರಿಯಾದಲ್ಲಿ 300 ಹಾಸಿಗೆ ಕೋವಿಡ್ ಮೀಸಲಿದ್ದು, ಎರಡು ದಿನದೊಳಗೆ 500 ಕ್ಕೆ ಏರಿಸಲು ಸೂಚಿಸಲಾಗಿದೆ. ಬೌರಿಂಗ್ ನಲ್ಲಿ 300 ಹಾಸಿಗೆ, ಚರಕ ಆಸ್ಪತ್ರೆಯಲ್ಲಿ ಎರಡು ದಿನದೊಳಗೆ 150 ಹಾಸಿಗೆ, ಘೋಷಾ ಆಸ್ಪತ್ರೆಯಲ್ಲಿ 100 ಹಾಸಿಗೆ, ಕೆ.ಸಿ.ಜನರಲ್ ನಲ್ಲಿ 100 ಹಾಸಿಗೆ ಕೋವಿಡ್ ಗೆ ಮೀಸಲಿಡಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕೋವಿಡ್ ಗೆ ಹಾಸಿಗೆ ಮೀಸಲಿಡಲು ಖಾಸಗಿ ಆಸ್ಪತ್ರೆಗಳಿಗೆ ಈಗಾಗಲೇ ಮನವಿ ಮಾಡಲಾಗಿದೆ. ಕಳೆದ 15 ದಿನಗಳಿಂದ ಕೋರುತ್ತಿದ್ದರೂ ಕೆಲವು ಆಸ್ಪತ್ರೆಗಳು 15-20% ಹಾಸಿಗೆ ಮಾತ್ರ ನೀಡಿವೆ. ಇನ್ನು ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಲಿದೆ. ಖಾಸಗಿ ಆಸ್ಪತ್ರೆಗಳು ಎಚ್ಚೆತ್ತುಕೊಳ್ಳದಿದ್ದರೆ, ಕಳೆದ ವರ್ಷದಂತೆಯೇ ಗಂಭೀರ ಕ್ರಮ ಕೈಗೊಳ್ಳಬೇಕಾಗುತ್ತದೆ. ಕೋವಿಡ್ ಹೊರತಾದ ರೋಗಿಗಳಲ್ಲಿ ತುರ್ತು ಇರುವವರಿಗೆ ಮಾತ್ರ ಚಿಕಿತ್ಸೆ ನೀಡಬೇಕು. ಕೋವಿಡ್ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಸಿಗದಿದ್ದರೆ ಸರ್ಕಾರ ಸುಮ್ಮನಿರಲು ಸಾಧ್ಯವಿಲ್ಲ. ಆದರೂ ಈಗ ಖಾಸಗಿ ಆಸ್ಪತ್ರೆಗಳು ಸರ್ಕಾರದೊಂದಿಗೆ ನಿಲ್ಲಬೇಕು ಎಂದು ಮನವಿ ಮಾಡುತ್ತೇನೆ ಎಂದಿದ್ದಾರೆ..